ಪಾದುಕೆಯ ಕಂಟಕ ಸಿಕತ ಮೊದ
ಲಾದುವನುದಿನ ಬಾಧಿಸವು ಏ
ಕಾದಶೇಂದ್ರಿಯಗಳಲಿ ಬಿಡಾದೆ ಹೃಷೀಕಪನ ಮೂರ್ತಿ |
ಸಾದರದಿ ನೆನೆವವನು ಏನಪ
ರಾಧಗಳು ಮಾಡಿದರು ಸರಿಯೆ ನಿ
ರೋಧಗೈಸವು ಮೋಕ್ಷ ಮಾರ್ಗಕೆ ದುರಿತ ರಾಶಿಗಳು  ||೧||

ಹಗಲ ನಂದಾದೀಪದಂದದಿ
ನಿಗಮವೇದ್ಯನ ಪೂಜಿಸುತ ಕೈ
ಮುಗಿದು ನಾಲ್ಕರೊಳೊಂದು ಪುರುಷಾರ್ಥವನು ಬೇಡದಲೆ |
ಜಗದುದರ ಕೊಟ್ಟುದನು ಭುಂಜಿಸು
ಮಗಮಡದಿ ಪ್ರಾಣೇಂದ್ರಿಯಾತ್ಮಾ
ದಿಗಳು ಭಗವದಧೀನವೆಂದಡಿಗಡಿಗೆ ನೆನೆವುತಿರು  ||೨||

ಅಸ್ವತಂತ್ರನು ಜೀವ ಹರಿಸ
ರ್ವಸ್ವತಂತ್ರನು ನಿತ್ಯ ಸುಖಮಯ
ನಿಸ್ವಬದ್ಧಾಲ್ಪಜ್ಞ ಶಕ್ತ ಸದುಃಖಿ ನಿರ್ವಿಣ್ಣ |
ಗ್ರಸ್ವದೇಹಿ ಸನಾಥ ಜೀವನು
ವಿಶ್ವವ್ಯಾಪಕ ಕರ್ತೃಬ್ರಹ್ಮ ಸ
ರಸ್ವತೀಶಾದ್ಯಮರನುತ ಹರಿ ಎಂದು ಕೊಂಡಾಡು  ||೩||

ಮತ್ತೆ ವಿಶ್ವಾದ್ಯೆಂಟು ರೂಪೊಂ
ಭತ್ತರಿಂದಲಿ ಪೆಚ್ಚಿಸಲು ಎ
ಪ್ಪತ್ತೆರಡು ರೂಪಗಳಹವು ಒಂದೊಂದೆ ಸಾಹಸ್ರ |
ಪೃಥಪೃಥಕ್ ನಾಡಿಗಳೊಳಗೆ ಸ
ರ್ವೋತ್ತಮನ ತಿಳಿಯೆಂದು ಭೀಷ್ಮನು
ಬಿತ್ತರಿಸಿದನು ಧರ್ಮ ತನಯಗೆ ಶಾಂತಿ ಪರ್ವದಲಿ  ||೪||

ಎಂಟು ಪ್ರಕೃತಿಗಳೊಳಗೆ ವಿಶ್ವಾ
ದ್ಯೆಂಟು ರೂಪದಲಿದ್ದು ಭಕುತರ
ಕಂಟಕವ ಪರಿಹರಿಸುತಲಿ ಪಾಲಿಸುವ ಪ್ರತಿದಿನದಿ |
ನೆಂಟನಂದದಿ ಎಡಬಿಡದೆ ವೈ
ಕುಂಠರಮಣ ತನ್ನವರ ನಿ
ಷ್ಕಂಟಕ ಸುಮಾರ್ಗದಲಿ ನಡೆಸುವ ದುರ್ಜನರ ಬಡಿವ  ||೫||

ಸ್ವರಮಣನು ಶಕ್ತ್ಯಾದಿ ರೂಪದಿ
ಕರಣ ಮಾನಿಗಳೊಳಗೆ ನೆಲೆಸಿ
ದ್ದರ ವಿದೂರನು ಸ್ಠೂಲ ವಿಷಯಗಳುಂಡುಣಿಪ ನಿತ್ಯ |
ಅರಿಯದಲೆ ತಾನುಂಬೆನೆಂಬುವ
ನಿರಯಗಳನುಂಬುವನು ನಿಶ್ಚಯ
ಮರಳಿ ಮರಳಿ ಭವಾಟವಿಯ ಸಂಚರಿಸಿ ಬಳಲುವನು  ||೬||

ಸುರುಚಿ ರುಚಿರ ಸುಗಂಧ ಶುಚಿಯೆಂ
ದಿರುತಿಹನು ಷಡ್ರಸಗಳೊಳು ಹ
ನ್ನೆರಡು ರೂಪದಲಿಪ್ಪ ಶ್ರೀಭೂದುರ್ಗೆಯರ ಸಹಿತ
ಸ್ವರಮಣನು ಎಪ್ಪತ್ತೆರಡು ಸಾ
ವಿರ ಸಮೀರನ ರೂಪದೊಳಗಿ
ದ್ದುರು ಪರಾಕ್ರಮ ಕರ್ತೃ ಎನಿಸುವ ನಾಡಿಗಳೊಳಿದ್ದು  ||೭||

ನಿನ್ನ ಸರ್ವತ್ರದಲಿ ನೆನೆವವ
ರನ್ಯ ಕರ್ಮವ ಮಾಡಿದರು ಸರಿ
ಪುಣ್ಯಕರ್ಮಗಳೆನಿಸುವುವು ಸಂದೇಹವಿನಿತಿಲ್ಲ |
ನಿನ್ನ ಸ್ಮರಿಸದೆ ಸ್ನಾನ ಜಪ ಹೋ
ಮಾನ್ನ ವಸ್ತ್ರ ಗಜಾಶ್ವ ಭೂಧನ
ಧಾನ್ಯ ಮೊದಲಾದಖಿಳ ಧರ್ಮವ ಮಾಡಿ ಫಲವೇನು?  ||೮||

ಇಷ್ಟಭೋಗ್ಯ ಪದಾರ್ಥದೊಳು ಶಿಪಿ
ವಿಷ್ಟನಾಮದಿ ಸರ್ವ ಜೀವರ
ತುಷ್ಟಿಪಡಿಸುವ ದಿನದಿನದಿ ಸಂತುಷ್ಟ ತಾನಾಗಿ |
ಕೋಷ್ಟದೊಳು ನೆಲೆಸಿದ್ದು ರಸಮಯ
ಪುಷ್ಟಿ ಐದಿಸುತಿಂದ್ರಿಯಗಳೊಳು
ಪ್ರೇಷ್ಟನಾಗಿದ್ದೆಲ್ಲ ವಿಷಯಗಳುಂಬ ತಿಳಿಸದಲೆ  ||೯||

ಕಾರಕಾಹ್ವಯ ಜ್ಞಾನಕರ್ಮ
ಪ್ರೇರಕನು ತಾನಾಗಿ ಕ್ರಿಯೆಗಳ
ತೋರುವನು ಕರ್ಮೇಂದ್ರಿಯಾಧಿಪರೊಳಗೆ ನೆಲೆಸಿದ್ದು |
ಮೂರು ಗುಣಮಯ ದ್ರವ್ಯಗತದಾ
ಕಾರ ತನ್ನಾಮದಲಿ ಕರೆಸುವ
ತೋರಿಕೊಳ್ಳದೆ ಜನರ ಮೋಹಿಪ ಮೋಹಕಲ್ಪಕನು  ||೧೦||

ದ್ರವ್ಯನೆನಿಸುವ ಭೂತಮಾತ್ರದೊ
ಳವ್ಯಯನು ಕರ್ಮೇಂದ್ರಿಯಗಳೊಳು
ಭವ್ಯ ಸತ್ಕ್ರಿಯನೆನಿಸಿ ಸುಖಮಯ
ಸೇವ್ಯ ಸೇವಕನೆನಿಸಿ ಜಗದೊಳು
ಹವ್ಯ ವಾಹನನರಣಿಯೊಳಗಿಪ್ಪಂತೆ ಇರುತಿಪ್ಪ  ||೧೧||

ಮನವೆ ಮೊದಲಾದಿಂದ್ರಿಯಗಳೊಳ
ಗನಿಲದೇವನು ಶುಚಿಯೆನಿಸಿಕೊಂ
ಡನವರತ ನೆಲೆಸಿಪ್ಪ ಶುಚಿಷದ್ಧೋತನೆಂದೆನಿಸಿ |
ತನುವಿನೊಳಗಿಪ್ಪನು ಸದಾ ವಾ
ಮನಹೃಷೀಕೇಶಾಖ್ಯ ರೂಪದ
ಲನುಭವಕೆ ತಂದೀವ ವಿಷಯಜ ಸುಖವ ಜೀವರಿಗೆ  ||೧೨||

ಪ್ರೇರಕ ಪ್ರೇರ್ಯರೊಳು ಪ್ರೇರ್ಯ
ಪ್ರೇರಕನು ತಾನಾಗಿ ಹರಿ ನಿ
ರ್ವೈರದಿಂದ ಪ್ರವರ್ತಿಸುವ ತನ್ನಾಮರೂಪದಲಿ |
ತೋರಿ ಕೊಳ್ಳದೆ ಸರ್ವರೊಳು ಭಾ
ಗೀರಥೀ ಜನಕನು ಸಕಲ ವ್ಯಾ
ಪಾರಗಳ ತಾ ಮಾಡಿ ಮಾಡಿಸಿ ನೋಡಿ ನಗುತಿಪ್ಪ  ||೧೩||

ಹರಿಯೆ ಮುಖ್ಯ ನಿಯಾಮಕನು ಎಂ
ದರಿದು ಪುಣ್ಯಾ ಪುಣ್ಯ ಹರುಷಾ
ಮರುಷ ಲಾಭಾ ಲಾಭ ಸುಖ ದುಃಖಾದಿ ದ್ವಂದ್ವಗಳ |
ನಿರುತ ಅವನಂಘ್ರಿಗೆ ಸಮರ್ಪಿಸಿ
ನರಕ ಭೂ ಸ್ವರ್ಗಾಪವರ್ಗದಿ
ಕರಣ ನಿಯಾಮಕನ ಸರ್ವತ್ರದಲಿ ನೆನೆವುತಿರು  ||೧೪||

ಮಾಣವಕ ತತ್ಫಲಗಳನುಸಂ
ಧಾನವಿಲ್ಲದೆ ಕರ್ಮಗಳ ಸ್ವೇ
ಚ್ಛ್ಹಾನುಸಾರದಿ ಮಾಡಿ ಮೋದಿಸುವಂತೆ ಪ್ರತಿದಿನದಿ |
ಜ್ಞಾನ ಪೂರ್ವಕ ವಿಧಿ ನಿಷೇಧಗ
ಳೇನು ನೋಡದೆ ಮಾಡು ಕರ್ಮಪ್ರ
ಧಾನ ಪುರುಷೇಶನಲಿ ಭಕುತಿಯ ಬೇಡು ಕೊಂಡಾಡು  ||೧೫||

ಹಾನಿವೃದ್ಧಿ ಜಯಾಪಜಯಗಳು
ಏನು ಕೊಟ್ಟುದ ಭುಂಜಿಸುತ ಲ
ಕ್ಷ್ಮೀನಿವಾಸನ ಕರುಣವನೆ ಸಂಪಾದಿಸನುದಿನದಿ |
ಜ್ಞಾನಸುಖಮಯ ತನ್ನವರ ಪರ
ಮಾನುರಾಗದಿ ಸಂತಯಿಪ ದೇ
ಹಾನುಬಂಧಿಗಳಂತೆ ಒಳಹೊರಗಿದ್ದು ಕರುಣಾಳು  ||೧೬||

ಆ ಪರಮ ಸಕಲೇಂದ್ರಿಯಗಳೊಳು
ವ್ಯಾಪಕನು ತಾನಾಗಿ ವಿಷಯವ
ತಾ ಪರಿಗ್ರಹಿಸುವನು ತಿಳಿಸದೆ ಸರ್ವ ಜೀವರೊಳು |
ಪಾಪರಹಿತ ಪುರಾಣ ಪುರುಷ ಸ
ಮೀಪದಲಿ ನೆಲೆಸಿದ್ದು ನಾನಾ
ರೂಪಧಾರಕ ತೋರಿಕೊಳ್ಳದೆ ಕರ್ಮಗಳ ಮಾಳ್ಪ  ||೧೭||

ಖೇಚರರು ಭೂಚರರು ವಾರಿ ನಿ
ಶಾಚರರೊಳಗಿದ್ದವರ ಕರ್ಮಗ
ಳಾಚರಿಸುವನು ಘನ ಮಹಿಮ ಪರಮಾಲ್ಪನೋಪಾದಿ |
ಗೋಚರಿಸನು ಬಹು ಪ್ರಕಾರಾ
ಲೋಚನೆಯ ಮಾಡಿದರು ಮನಸಿಗೆ
ಕೀಚಕಾರಿ ಪ್ರಿಯ ಕವಿಜನಗೇಯ ಮಹರಾಯ  ||೧೮||

ಒಂದೆ ಗೋತ್ರ ಪ್ರವರ ಸಂಧ್ಯಾ
ವಂದನೆಗಳನು ಮಾಡಿ ಪ್ರಾಂತಕೆ
ತಂದೆ ತನಯರು ಬೇರೆ ತಮ್ಮಯ ಪೆಸರುಗೊಂಬಂತೆ |
ಒಂದೆ ದೇಹದೊಳಿದ್ದು ನಿಂದ್ಯಾ
ನಿಂದ್ಯಕರ್ಮವ ಮಾಡಿ ಮಾಡಿಸಿ
ಇಂದಿರೇಶನು ಸರ್ವ ಜೀವರೊಳೀಶನೆನಿಸುವನು  ||೧೯||

ಕಿಟ್ಟಿಗಟ್ಟದ ಲೋಹ ಪಾವಕ
ಸುಟ್ಟುವಿಂಗಡ ಮಾಡುವಂತೆ ಘ
ರಟ್ಟ ವ್ರೀಹಿಗಳೊಳಿಪ್ಪ ತಂಡುಲ ಕಡೆಗೆ ತೆಗೆವಂತೆ |
ವಿಠ್ಠಲಾ ಎಂದೊಮ್ಮೆ ಮೈಮರೆ
ದಟ್ಟಹಾಸದಿ ಕರೆಯೆ ದುರಿತಗ
ಳಟ್ಟುಳಿಯ ಬಿಡಿಸಿ ಅವನ ತನ್ನೊಳಗಿಟ್ಟು ಸಲಹುವನು  ||೨೦||

ಜಲಧಿಯೊಳು ಸ್ವೇಚ್ಛ್ಹಾನುಸಾರದಿ
ಜಲಚರ ಪ್ರಾಣಿಗಳು ತತ್ತತ್
ಸ್ಥಳಗಳಲಿ ಸಂತೋಷಪಡುತಲಿ ಸಂಚರಿಸುವಂತೆ |
ನಳಿನನಾಭನೊಳಬ್ಜಭವ ಮು
ಪ್ಪೊಳಲುರಿಗ ಮೈಗಣ್ಣ ಮೊದಲಾ
ದ್ ಹಲವು ಜೀವರ ಗಣವು ವರ್ತಿಸುತಿಹುದು ನಿತ್ಯದಲಿ  ||೨೧||

ವಾಸುದೇವನು ಒಳಹೊರಗೆ ಆ
ಭಾಸಕನು ತಾನಾಗಿ ಬಿಂಬ ಪ್ರ
ಕಾಶಿಸುವ ತದ್ರೂಪ ತನ್ನಾಮದಲಿ ಸರ್ವತ್ರ |
ಈ ಸಮನ್ವಯವೆಂದೆನಿಪ ಸದು
ಪಾಸನೆಯಗೈವವನು ಮೋಕ್ಷಾ
ನ್ವೇಷಿಗಳೊಳುತ್ತಮನು ಜೀವನ್ಮುಕ್ತನವನಿಯೊಳು  ||೨೨||

ಭೋಗ್ಯ ವಸ್ತುಗಳೊಳಗೆ ಯೋಗ್ಯಾ
ಯೋಗ್ಯ ರಸಗಳನರಿತು ಯೋಗ್ಯಾ
ಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸನುದಿನದಿ |
ಭಾಗ್ಯ ಬಡತನ ಬರಲು ಹಿಗ್ಗದೆ
ಕುಗ್ಗಿ ಸೊರಗದೆ ಸದ್ಭಕುತಿ ವೈ
ರಾಗ್ಯ ಜ್ಞಾನವ ಬೇಡು ನೀ ನಿರ್ಭಾಗ್ಯನೆನಿಸದಲೆ  ||೨೩||

ಸ್ಥಳ ಜಲಾದ್ರಿಗಳಲ್ಲಿ ಜನಿಸುವ
ಫಲ ಸುಪುಷ್ಪಜ ಗಂಧರಸ ಶ್ರೀ
ತುಳಸಿ ಮೊದಲಾದಖಿಳ ಪೂಜಾ ಸಾಧನ ಪದಾರ್ಥ |
ಹಲವು ಬಗೆಯಿಂದರ್ಪಿಸುತ ಬಾಂ
ಬೊಳೆಯ ಜನಕಗೆ ನಿತ್ಯ ನಿತ್ಯದಿ
ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು  ||೨೪||

ಶ್ರೀಕರನ ಸರ್ವತ್ರದಲಿಯವ
ಲೋಕಿಸುತ ಗುಣರೂಪಕ್ರಿಯೆ ವ್ಯತಿ
ರೇಕ ತಿಳಿಯದಲನ್ವಯಿಸು ಬಿಂಬನಲಿ ಮರೆಯದಲೆ |
ಸ್ವೀಕರಿಸುವನು ಕರುಣದಿಂದ
ನಿರಾಕರಿಸದೆ ಕೃಪಾಳು ಭಕ್ತರ
ಶೋಕಗಳ ಪರಿಹರಿಸಿ ಸುಖವಿತ್ತನವರತ ಪೊರೆವ  ||೨೫||

ಇನಿತು ವ್ಯತಿಕೇಕಾನ್ವಯಗಳೆಂ
ದೆನಿಪ ಪೂಜಾವಿಧಿಗಳನೆ ತಿಳಿ
ದನಿಮಿಷೇಶನ ತೃಪ್ತಿ ಪಡಿಸುತಲಿರು ನಿರಂತರದಿ |
ಘನ ಮಹಿಮ ಕೈಗೊಂಡು ಸ್ಥಿತಿಮೃತಿ
ಜನುಮಗಳ ಪರಿಹರಿಸಿ ಸೇವಕ
ಜನರೊಳಿಟ್ಟಾನಂದ ಪಡಿಸುವ ಭಕ್ತವತ್ಸಲನು  ||೨೬||

ಜಲಜನಾಭನಿಗೆರಡು ಪ್ರತಿಮೆಗ
ಳಿಳೆಯೊಳಗೆ ಜಡ ಚೇತನಾತ್ಮಕ
ಚಲದೊಳಿರ್ಬಗೆ ಸ್ತ್ರೀಪುರುಷ ಭೇದದಲಿ ಜಡದೊಳಗೆ |
ತಿಳಿವುದಾಹಿತ ಪ್ರತಿಮೆ ಸಹಜಾ
ಚಲಗಳೆಂದೀರ್ಬಗೆ ಪ್ರತೀಕದಿ
ಲಲಿತ ಪಂಚತ್ರಯ ಸುಗೋಳಕವರಿತು ಭಜಿಸುತಿರೆ ||೨೭||

ವಾರಿಜಾಸನ ವಾಯು ವೀಂದ್ರ ಉ
ಮಾರಮಣ ನಾಕೇಶ ಸ್ಮರಾಹಂ
ಕಾರಿಕ ಪ್ರಾಣಾದಿಗಳು ಪುರುಷರ ಕಳೇವರದಿ |
ತೋರಿಕೊಳದನಿರುದ್ಧ ದೋಷವಿ
ದೂರ ನಾರಾಯಣನ ರೂಪ ಶ
ರೀರಮಾನಿಗಳಾಗಿ ಭಜಿಸುತ ಸುಖವ ಕೊಡುತಿಹರು  ||೨೮||

ಸಿರಿ ಸರಸ್ವತಿ ಭಾರತಿ  ಸೌ
ಪರಣಿ ವಾರುಣಿ ಪಾರ್ವತೀ ಮುಖ
ರಿರುತಿಹರು ಸ್ತ್ರೀಯರೊಳಗಭಿಮಾನಿಗಳು ತಾವೆನಿಸಿ |
ಅರುಣ ವರ್ಣ ನಿಭಾಂಗ ಶ್ರೀ ಸಂ
ಕರುಷಣ ಪ್ರದ್ಯುಮ್ನ ರೂಪಗ
ಳಿರುಳು ಹಗಲು ಉಪಾಸನವ ಗೈವುತಲೆ ಮೋದಿಪರು  ||೨೯||

ಕೃತಪ್ರತೀಕದಿ ಟಂಕಿಭಾರ್ಗವ
ಹುತವಹಾನಿಲ ಮುಖ್ಯ ದಿವಿಜರು
ತುತಿಸಿಕೊಳುತಭಿಮಾನಿಗಳು ತಾವಾಗಿ ನೆಲೆಸಿದ್ದು |
ಪ್ರತಿದಿವಸ ಶ್ರೀ ತುಳಸಿ ಗಂಧಾ
ಕ್ಷತೆ ಕುಸುಮ ಫಲ ದೀಪ ಪಂಚಾ
ಮೃತದಿ ಪೂಜಿಪ ಭಕುತರಿಗೆ ಕೊಡುತಿಹರು ಪುರುಷಾರ್ಥ  ||೩೦||

ನಗಗಳಭಿಮಾನಿಗಳೆನಿಪ ಸುರ
ರುಗಳು ಸಹಜಾಚಲಗಳಿಗೆ ಮಾ
ನಿಗಳೆನಿಸಿ ಶ್ರೀವಾಸುದೇನವನ ಪೂಜಿಸುತಲಿಹರು |
ಸ್ವಗತಭೇದ ವಿವರ್ಜಿತನ ನಾ
ಲ್ಬಗೆ ಪ್ರತೀಕದಿ ತಿಳಿದು ಪೂಜಿಸೆ
ವಿಗತ ಸಂಸಾರಾಬ್ಧಿ ದಾಟಿಸಿ ಮುಕ್ತರನು ಮಾಳ್ಪ  ||೩೧||

ಆವಕ್ಷೇತ್ರಕೆ ಪೋದರೇನಿ
ನ್ನಾವ ತೀರ್ಥದಿ ಮುಳುಗಲೇನಿ
ನ್ನಾವ ಜಪತಪ ಹೋಮ ದಾನವ ಮಾಡಿ ಫಲವೇನು |
ಶ್ರೀವರ ಜಗನ್ನಾಥವಿಠಲನ
ಈ ವಿಧದಿ ಜಂಗಮ ಸ್ಥಾವರ
ಜೀವರೊಳು ಪರಿಪೂರ್ಣನೆಂದರಿಯದಿಹ ಮಾನವರು ||೩೨||